Home ಸೆಕ್ಸ್ ಗುರುವಿನ ಸನ್ನಿಧಿಯಲ್ಲಿ….

ಸೆಕ್ಸ್ ಗುರುವಿನ ಸನ್ನಿಧಿಯಲ್ಲಿ….

ಸೆಕ್ಸ್ ಗುರುವಿನ ಸನ್ನಿಧಿಯಲ್ಲಿ….

ಚೇತನಾ ತೀರ್ಥಹಳ್ಳಿ

ಓಶೋ!

ಈ ಹೆಸರು ಕಿವಿಗೆ ಬಿದ್ದ ಕ್ಷಣಕ್ಕೆ ನೆನಪಾಗೋದು ಅಮ್ಮನ ಆ ಅವತ್ತಿನ ತಟವಟ. “ಆ ಹಾಳಾದ xyz ತಾನು ಕೆಡೋದಲ್ದೆ ಊರು ಹಾಳು ಮಾಡ್ತಾನೆ. ಆ ಮನುಷ್ಯನ್ನ ನೋಡಿದ್ರೆ ಸ್ವಾಮೀಜಿ ಥರ ಕಾಣ್ತಾನಾ?”
ಅಪ್ಪ ಸಹೋದ್ಯೋಗಿ ಬಳಿಯಿಂದ ಮನೆಯಲ್ಲಿ ತಂದಿಟ್ಟುಕೊಂಡಿದ್ದ ಓಶೋ ಪುಸ್ತಕವನ್ನ ನೋಡೀ ನೋಡೀ ಸಿಡುಕುತ್ತಿದ್ದಳು. ಯಾರಾದ್ರೂ ನೋಡಿದ್ರೆ ಏನು ತಿಳಿದಾರು! ಅನ್ನುವ ಆತಂಕ ಜೊತೆಗೆ. ನಾನು ಕೇಳೀಕೇಳೀ ರೇಜಿಗೆ ಬಿದ್ದು ಕೇಳಿದ್ದೆ, “ಯಾಕೆ?”

ಬಹಳಷ್ಟು ಜನ ಓಶೋ ಬಗ್ಗೆ ತಳೆದಿರುವ ಅಭಿಪ್ರಾಯವನ್ನೆ ನನ್ನ ಮುಗ್ಧ ಅಮ್ಮನೂ ಹೇಳಿದ್ದಳು. ಅದು ಎಂಭತ್ತರ ದಶಕ. ಓಶೋ ಎಂಬ ಮಹಾ ಸಂತನ ಬಗ್ಗೆ ಭಾರತ ಮಾತ್ರವೇನು, ಪಶ್ಚಿಮ ದೇಶಗಳಲ್ಲೂ ಸಾಕಷ್ಟು ಪುಕಾರು ಹಬ್ಬಿದ್ದ ಕಾಲವದು. ಅಂಥ ಸಂದರ್ಭದಲ್ಲಿ ಅವಳ ಯೋಚನೆ ತಪ್ಪೇನೂ ಆಗಿರಲಿಲ್ಲ ಅನ್ನಿಸುತ್ತೆ. ಯಾಕಂದರೆ ಅದೇ ಅಮ್ಮ ಆಮೇಲೆ ನನ್ನ ಕಪಾಟಿನಿಂದ ಹಲವು ಓಶೋ ಪುಸ್ತಕಗಳನ್ನ ತೆಗೆದು ಕಣ್ಣಾಡಿಸಿದ್ದಾಳೆ; ಆಗೀಗ ಅದರ ಕೆಲವು ವಿಚಾರಗಳ ಉಲ್ಲೇಖವನ್ನೂ ಮಾಡುವಷ್ಟು ಬದಲಾಗಿದ್ದಾಳೆ.ಅದೇನೇ ಇರಲಿ, ನನಗೆ ಓಶೋ ಮೊದಲ ಬಾರಿ ಪರಿಚಯವಾಗಿದ್ದು ಹೀಗೆ. ಅದೇನು ತಿಕ್ಕಲುತನವೋ! ಅಮ್ಮ ಮಾಡಿದ್ದ ಆರೋಪವೇ ನನ್ನಲ್ಲಿ ಓಶೋ ಬಗ್ಗೆ ಕುತೂಹಲ ಹುಟ್ಟಿಸಿತ್ತು. ಇಷ್ಟೆಲ್ಲ ಬೈಸಿಕೊಳ್ಳುವ ಈ ಮನುಷ್ಯನ ಮಾತನ್ನ ಅಷ್ಟೊಂದು ಜನ ಕೇಳ್ತಾರೆ ಅಂದ್ರೆ ಸುಮ್ಮನೆನಾ? ಅನ್ನುವಂಥ ಕುತೂಹಲವದು. ಮುಂದೊಂದು ದಿನ ’ಶೂನ್ಯ ನಾವೆ’ ಏರಿ ಶುರುವಾದ ನನ್ನ ಓಶೋ ಯಾನ ಈ ಹೊತ್ತಿನವರೆಗೆ ಸೇರಿದೆ.

ವಿಷಯ ಅದಲ್ಲ… ಓಶೋ ಸಹವಾಸ ಬಹಳ ವಿಚಿತ್ರ. ಅಲ್ಲಿ ತೇಲುವ ಸುರಕ್ಷಣಾ ಪ್ರಿಯರಿಗೆ ತಾವಿಲ್ಲ. ಅಲ್ಲೇನಿದ್ದರೂ ಮುಳುಗಬೇಕು. ಮುಳುಗುವುದಾದರೂ ಎಲ್ಲಿ? ತಳವಿಲ್ಲದಾಳದಲ್ಲಿ…. ಅದನ್ನ ಓಶೋ abyss ಅಂತ ಹೇಳ್ತಾರೆ. ಹಾಗೆ ಮುಳುಗುವ ಧೈರ್ಯ ತೋರುವವರಿಗಷ್ಟೆ ಓಶೋ ವಿಚಾರಗಳನ್ನು ತಿಳಿಯುವ, ಅರ್ಥ ಮಾಡಿಕೊಳ್ಳುವ ಅರ್ಹತೆ ಒದಗುತ್ತದೆ..

ಹನ್ನೆರಡು ವರ್ಷಗಳಿಂದ ಕನ್ನಡ, ಇಂಗ್ಲಿಷ್‌ಗಳಲ್ಲಿ ಇರುವ ಸುಮಾರು ಮೂವತ್ತು ಓಶೋ ಪುಸ್ತಕಗಳನ್ನ ಓದಿರಬಹುದು. ಅವರ ಚಿಂತನೆಗಳ ಎಳೆಯಿಟ್ಟುಕೊಂಡು ಏನಿಲ್ಲವೆಂದರೂ ಇಪ್ಪತ್ತೈದು ಲೇಖನ ಬರೆದಿರಬಹುದು. ಇಷ್ಟೆಲ್ಲ ಆದರೂ ನನಗೆ ಆ ರಸಗುಲ್ಲ ಕಣ್ಣಿನ ಖದೀಮ ಸಂತನ (ಮುದ್ದಿಗೂ ಬೈಯುತ್ತಾರೆ ತಾನೆ?) ಜೋಳಿಗೆಯಲ್ಲಿ ಬೀಳಲು ಸಾಧ್ಯವಾಗಿರಲಿಲ್ಲ. ಸುಮಾರು ಎರಡೂ ವರ್ಷದ ಹಿಂದೆ ತಲೆ ಮೇಲೆ ಕುಟ್ಟಿದರೂ ಸಿಟ್ಟುಕೊಳ್ಳದ ಸಹೋದ್ಯೋಗಿಯೊಬ್ಬ ’ಹಾಗೆ ಬೀಳುವುದಾದರೆ ಹೇಗೆ ಬೀಳಬೇಕು’ ಅನ್ನುವುದನ್ನ ಸ್ವಲ್ಪ ಸ್ವಲ್ಪ ಅರಿವಿಗೆ ತಂದ. ಆ ಮನುಷ್ಯನ ಮಾರ್ಗದರ್ಶನದಲ್ಲಿ ಕೇವಲ ಪದ ಚಮತ್ಕಾರವಾಗಿದ್ದ ಓಶೋ ಎದೆಗೂ ಇಳಿಯತೊಡಗಿದರು. ಹಾಗೆ ಇಳಿಯುತ್ತ ಹೋದಂತೆಲ್ಲ ಉಸಿರುಗಟ್ಟಿದ ಅನುಭವ. ಯಾಕೆ? ಆ ಸಂತ ಹೇಳುವ ಸತ್ಯಗಳು ಕಾಣದ ಕೇಳದಪರಬ್ರಹ್ಮದ್ದಲ್ಲ, ಕನ್ನಡಿಯೊಳಗಿನ ನಮ್ಮದೇ ಪ್ರತಿಬಿಂಬದ್ದು! ಆ ಕನ್ನಡಿಯಿಂದ ಹೊರ ಬಂದರೆ ನೀನೇ ಬ್ರಹ್ಮ ಅಂತ ಅವರನ್ನುವಾಗ ನೆಚ್ಚಿಕೊಂಡಿರುವ ನಿಜದ ಅಹಂಕಾರ ಕಳೆದುಹೋಗ್ತದಲ್ಲವೆ? ನಾವು ಜೀವ ಬಿಟ್ಟಾದರೂ ಬದುಕೇವು, ಅಹಂಕಾರ ಬಿಟ್ಟು!?

ಶಿಷ್ಯ ಸಿದ್ಧನಾದಾಗ ಗುರು ಕಾಣಿಸಿಕೊಳ್ತಾನೆ ಅನ್ನುವ ಮಾತಿದೆ. ಈ ಮಾತಿನ ನಿಜ ಕಂಡುಕೊಂಡಿದ್ದು ಇತ್ತೀಚೆಗೆ. ಹಿರಿಯ ಗೆಳತಿಯೊಬ್ಬರು ಮತ್ತೆ ಓಶೋರನ್ನು ಧುತ್ತನೆ ತಂದು ಕಣ್ಮುಂದೆ ನಿಲ್ಲಿಸಿದರು. ಮೈಸೂರಿನ ಬಳಿ ಉತ್ತನ ಹಳ್ಳಿ; ಅಲ್ಲೊಂದು ಸನ್ನಿಧಿ; ಆ ಸನ್ನಿಧಿಯಲ್ಲಿ ’ಓಶೋ ಅಲ್ಲಮ’ ಫೌಂಢೇಷನ್… ಇತ್ಯಾದಿಯಾಗಿ. ತಗೋ! ನನ್ನನ್ನ ಸೆಳೆದಿದ್ದು ಓಶೋ ಮಾತ್ರ ಅಲ್ಲ, ಅಲ್ಲಮನೂ ಕೂಡ!

ನಾನು ರೋಮಾಂಚಿತಳಾಗಿದ್ದು ಎರಡು ಕಾರಣಕ್ಕೆ. ಮೊದಲನೆಯದು, ಅಲ್ಲಮ ನನ್ನ ಮೆಚ್ಚಿನ ಅನುಭಾವಿ. ಅಲ್ಲಮನ ಒಂದು ವಚನ ಸಾಕು ಒಂದು ಬದುಕಿಗೆ ಅನ್ನುವಷ್ಟು ತೀವ್ರ ಪ್ರೇಮಾಭಿಮಾನ ನನಗೆ. ಎರಡನೆಯದು, ಓಶೋ ಪ್ರೇಮಿಯೊಬ್ಬರು ಅಲ್ಲಮನನ್ನೂ ಸೇರಿಸಿ ಪ್ರತಿಷ್ಠಾನ ಕಟ್ಟಿರುವುದು. ಯಾವತ್ತೂ ನನಗೆ ಹಿತ್ತಲ ಗಿಡಕ್ಕೆ ತೋರುವ ತಾತ್ಸಾರದ ಬಗ್ಗೆ ಅಸಮಾಧಾನ. ಇಲ್ಲೊಬ್ಬರು ಅಂತಾರಾಷ್ಟ್ರೀಯ ಗ್ಲಾಮರ‍್ ಉಳ್ಳ ಓಶೋ ಮತ್ತು ನೆಲದ ಸೊಗಡಿನ ಅನುಭಾವೀ ಜಂಗಮ – ಈ ಇಬ್ಬರನ್ನು ಒಟ್ಟಿಗೆ ಕೂರಿಸಿದ್ದಾರೆ!

ಖುಷಿಯಾಗಲು, ಆಸಕ್ತಿ ಗರಿಗೆದರಲು ಇಷ್ಟು ಸಾಕಾಯ್ತು. ಕಾಲು ಕಡಿತ ಮತ್ತಷ್ಟು ಜೋರು. ಆದರೂ ಒಳಗಿನ ತಡೆಯಿದ್ದುದು ಬಹುಶಃ ಅಲ್ಲಿರಬಹುದಾದ ಗುಂಪಿನ ರೇಜಿಗೆಗೆ. ಗುಂಪುಫೋಬಿಯಾದ ನಾನು ಮೊದಲ ಸಾರ್ತಿ ಶಿಬಿರ ವಿವರ ವಿಚಾರಿಸಿ ರಿಜಿಸ್ಟರ್‌ ಕೂಡ ಮಾಡಿಸಿ, ಆತ್ಮಬಂಧು ಒಬ್ಬರನ್ನ ಕಳಿಸಿಕೊಟ್ಟೆ. ಆ ವ್ಯಕ್ತಿ ಮರಳಿದ ಮೇಲಿನ ಬದಲಾವಣೆ ಕಂಡು ಬೆರಗಿನಷ್ಟೇ ಅಸೂಯೆಯನ್ನೂ ಪಟ್ಟೆ!! ಅದಾಗಿ ಹತ್ತೇ ದಿನಕ್ಕೆ ಮತ್ತೆ ಮೂರು ದಿನಗಳ ಶಿಬಿರ. ಅವರಿಗೆ ತಾವು ಸವಿದ ಸಿಹಿಯನ್ನ ನನಗೂ ರುಚಿ ತೋರಿಸುವ ಉತ್ಸಾಹ. ಬಹುಶಃ ಅವರಿಗೆ ನನ್ನಿಂದ ಪಡೆದ ‌ಅವಕಾಶಕ್ಕೆ ಪ್ರತಿಯಾಗಿ ಅದೇ ಅವಕಾಶವನ್ನ ಒದಗಿಸಿಕೊಡಬೇಕನ್ನುವ ತುಡಿತವಿತ್ತೇನೋ. ವ್ಯವಸ್ಥೆಯಾಯ್ತು. ನಾ ನಾ ಕರ‍್ತೇ ಅಂತೂ ಗುರುವಾರ ಮಧ್ಯಾಹ್ನ ನಾನು ಸನ್ನಿಧಿಯ ಅಂಗಳದಲ್ಲಿದ್ದೆ, ಓಶೋರ ತೋಳುಗಳಲ್ಲಿ….

ಸನ್ನಿಧಿ, ಒಂದು ಧ್ಯಾನ ಕೇಂದ್ರ. ಓಶೋ ಅಲ್ಲಮ ಫೌಂಢೇಷನ್, ಮೈಸೂರು- ಹೆಸರಲ್ಲಿ (ಲಾಯರ‍್ ಆಗಿದ್ದ) ವೇಣುಗೋಪಾಲ್ ಅವರು ನಿರ್ಮಿಸಿರುವ ದಿವ್ಯ ತಾಣ. ಇಲ್ಲಿ ತಿಂಗಳಿಗೆ ಒಮ್ಮೆ ಅಥವಾ ಎರಡು ಸಾರ್ತಿ ಧ್ಯಾನ ಶಿಬಿರಗಳನ್ನ ನಡೆಸ್ತಾರೆ. ಮೈ – ಮನಸ್ಸುಗಳೆರಡಕ್ಕೂ ಪುಷ್ಟಿ ನೀಡುವ, ಅವನ್ನು ಹೀಲ್ ಮಾಡುವ ಮೆಡಿಟೇಷನ್ ಟೆಕ್ನಿಕ್‌ಗಳನ್ನ ಕಲಿಸ್ತಾರೆ. ಅವೆರಡರ ಪುಷ್ಟಿಯ ಉತ್ಸಾಹದಲ್ಲಿ ಮುನ್ನುಗ್ಗಿದರೆ ಆತ್ಮದ ಕದ ತೆರೆದುಕೊಳ್ಳುವುದು. ಅಲ್ಲಿಂದ ಮುಂದೆ ಆನಂದ ಬ್ರಹ್ಮ ಸ್ಥಿತಿ…
ಅಷ್ಟೆಲ್ಲ ಸಾಧನೆಗೇರುವವರು ಬಹಳ ಕಡಿಮೆ. ಈ ಶಿಬಿರಗಳಿಂದ ಕೆಲವರು ದೇಹಾರೋಗ್ಯದ ಪ್ರಯೋಜನ ಪಡೆದರೆ, ಮತ್ತೆ ಕೆಲವರು ಮನಸ್ಸನ್ನು ಸುಂದರವಾಗಿಸ್ಕೊಳ್ಳುವಲ್ಲಿ ಯಶಸ್ವಿಯಾಗ್ತಾರೆ. ಅವೆಲ್ಲ ಪ್ರಯೋಜನ ದಕ್ಕಿಸಿಕೊಳ್ಳಲಾಗದವರು ಕೊನೆಯ ಪಕ್ಷ ಮನ ಬಿಚ್ಚಿ ನಗುವ, ಆಡುತ್ತಾ – ಕುಣಿಯುತ್ತಾ ಧ್ಯಾನ ಮಾಡುವ (ಇದು ಓಶೋ ಸ್ಟೇಟ್‌ಮೆಂಟ್‌) ಭಾವವನ್ನಾದರೂ ತಲುಪುತ್ತಾರೆ.

ವಿಪರೀತ ಓದಿನ ಜಂಭವಿದ್ದ ನಾನು ಆಸೆಪಟ್ಟುಕೊಂಡು ಸನ್ನಿಧಿಗೆ ಹೋಗಿದ್ದು ಓಶೋ ಮತ್ತೆ ಮತ್ತೆ ಹೇಳುವ ’ಅಮನ’ದ ಆನಂದ ಪಡೆಯಲಾಗ್ತದಾ ನೋಡಲಿಕ್ಕೆ. ಅಲ್ಲಿ ಹೋದಾಗ ವೇಣುಗೋಪಾಲ್‌ ಎಲ್ಲರನ್ನೂ ನಗಿಸುತ್ತಲೇ ’ಮಗಳೇ ನಗೋದನ್ನ ಕಲಿ ಮೊದಲು. ದೇಹವನ್ನ ಪ್ರೀತಿಯಿಂದ ನೋಡಿಕೋ ಮೊದಲು. ಸಹಜೀವಿಗಳ ಜತೆ ಪ್ಲೆಸೆಂಟ್ ಆಗಿ ವರ್ತಿಸೋದನ್ನ ಕಲಿ ಮೊದಲು. ಆಮೇ….ಲೆ ಮನಸ್ಸಿನ ತಂಟೆಗೆ ಹೋದರಾಯ್ತು!’ ಅನ್ನುವ ಸಂದೇಶವನ್ನ ನನ್ನ ಅರಿವಿಗೆ ರವಾನಿಸಿದರು. ಈ ಮೊದಲ ಪಾಲ್ಗೊಳ್ಳುವಿಕೆಯಿಂದ ನನಗಾದ ಲಾಭ ಇದು.

ಓಶೋ ಅಂದ ಕೂಡಲೆ ತುಟಿಯಂಚು ಕೊಂಕಿಸುವವರೆ ಹೆಚ್ಚು. ಒಬ್ಬ ’ಸೆಕ್ಸ್’ ಗುರು ಇದ್ಕಕಿಂತ ಬೇರೆ ಯಾವ ಪ್ರತಿಕ್ರಿಯೆಯನ್ನ ತಾನೆ ಪಡೆಯಲು ಸಾಧ್ಯ! ತಾನೆ? ಉಹು… ನಾವು ಜಾಣರು. ಕುರುಡು ಆನೆ ತಡಕಿದ ಕಥೆಯಂತೆ ನಮ್ಮದು. ಬಿಡಿ… ಈ ಬಗ್ಗೆ ಅದಾಗಲೇ ಸಾವಿರಾರು ಮಂದಿ ವಾದ – ಪ್ರತಿವಾದ ಮಾಡಿಯಾಗಿದೆ. ಪುಣ್ಯಕ್ಕೆ ನನ್ನಲ್ಲಿ ಅಂಥಾ ಅಪಕಲ್ಪನೆಗಳು ಇದ್ದಿಲ್ಲ ಅನ್ನುವುದೇ ಸಮಾಧಾನ. ಬದಲಿಗೆ, ಸನ್ನಿಧಿ ’ವುಮನ್ ಫ್ರೆಂಡ್ಲಿ’ ಧ್ಯಾನ ಕೇಂದ್ರವಾಗಿತ್ತು ಅನ್ನುವುದು ಇನ್ನೂ ಹೆಚ್ಚಿನ ಸಮಾಧಾನ! ಜತೆಯಲ್ಲಿ ಗಂಡಸರಿರಲಿ, ಮತ್ತಷ್ಟು ಹೆಂಗಸರಿದ್ದರೇನೇ ದನಿ ತೆಗೆದು ಹಾಡಲು ಹಿಂದೆಮುಂದೆ ನೋಡುವ ಗೃಹಿಣಿಯರೂ ಇಲ್ಲಿ ಬಿಡುಬೀಸು ನೆಮ್ಮದಿಯಿಂದ ಇರುವುದನ್ನ ನೋಡಬೇಕು!! ನಾನೂ ನನ್ನ ರೂಮ್‌ಮೇಟ್‌ಗಳೂ ಈ ಬಗ್ಗೆ ಸಾಕಷ್ಟು ಮಾತಾಡಿಕೊಂಡೆವು. ಒಬ್ಬ ಹುಡುಗಿಯಂತೂ, “ಈ ಕ್ಯಾಂಪಸ್ಸಿನೊಳಗೆ ಇರುವ ಗಂಡಸರಂತೆಯೇ ಜಗತತ್ತಿನ ಗಂಡಸರೆಲ್ಲ ಇದ್ದುಬಿಟ್ಟಿದ್ದರೆ ಎಷ್ಟು ಚೆಂದವಿತ್ತು!” ಅಂದಳು. ಇದು ಬಹುತೇಕ ನಮ್ಮೆಲ್ಲರ ಅಭಿಪ್ರಾಯವೂ ಆಗಿತ್ತು. ಓಶೋ ಕ್ಯಾಂಪಸ್ಸಿನಲ್ಲಿ (ನಿರ್ದಿಷ್ಟವಾಗಿ ಮೈಸೂರಿನ ಸನ್ನಿಧಿಯಲ್ಲಿ) ಹೆಣ್ಣು ಮಕ್ಕಳನ್ನ ಹೇಗೆ ನಡೆಸಿಕೊಳ್ತಾರೆ ಅನ್ನುವುದನ್ನ ಮನದಟ್ಟು ಮಾಡೋಕೆ ಇನ್ನೂ ಹೆಚ್ಚಿನ ಮಾತು ಬೇಕೇನು?

ಹಾಗೇನೆ ಇನ್ನೆರಡು ಮಾತು. ವೇಣುಗೋಪಾಲ್ ಸನ್ನಿಧಿಯಲ್ಲಿ ಜಾತಿಯ ಪ್ರಶ್ನೆಯೇ ಇಲ್ಲ. ಜಾತಿ, ವರ್ಗ, ಅಂತಸ್ತು… ಉಹು… ಯಾವ ಮಾನದಂಡವೂ ಇಲ್ಲದೆ ಇಲ್ಲಿ ಎಲ್ಲರನ್ನೂ ಸ್ವಾಗತಿಸಲಾಗುತ್ತೆ. ನಾವು ಕಟ್ಟುವ ನೋಂದಾವಣೆ ಹಣ ನಮ್ಮದೇ ಊಟ ತಿಂಡಿ ವಸತಿ ವ್ಯವಸ್ಥೆಗಷ್ಟೆ. ಅದರಲ್ಲೂ ಆಸಕ್ತಿ ಹಾಗೂ ನಿಜವಾದ ಶ್ರದ್ಧೆಯುಳ್ಳವರಿಗೆ ವಿನಾಯಿತಿ ಕೊಟ್ಟ ಪ್ರಸಂಗ ನಮ್ಮ ಶಿಬಿರಾವಧಿಯಲ್ಲಿ ನಡೆಯಿತು.ಎಲ್ಲಕ್ಕಿಂತ ಮುಖ್ಯ, ಎಲ್ಲ ಬಗೆಯ ಧ್ಯಾನ ವಿಧಾನಗಳನ್ನು ಹೇಳಿಕೊಡುವ ವೇಣುಗೋಪಾಲ್ ಕಾಲಿಗೆ ನಮಸ್ಕಾರ ಮಾಡಿಸಿಕೊಳ್ಳುವುದಿಲ್ಲ, ಬದಲಿಗೆ ಆತ್ಮೀಯ ಅಪ್ಪುಗೆ ನೀಡುತ್ತಾರೆ! ಹಾಗೇನೇ ಅವರು ಗುರುಗಳು ಅಂತಲೂ ಕರೆಸಿಕೊಳ್ಳೋದಿಲ್ಲ. ಅವರಂತೆಯೇ ಅವರೆಲ್ಲ ಸಹಚಾರಿಗಳ ಮುಖ 24X7 ನಗೆಬೆಳಕು ಚೆಲ್ಲುತ್ತ ಇರುತ್ತದೆ. ಯಾವುದೂ ಕೃತಕ ಅನ್ನಿಸೋದಿಲ್ಲ. ಹಾಗಂತ ವೇಣುಗೋಪಾಲ್ ಯೋಗ ಶಿಕ್ಷಕರಲ್ಲ! ಅವರೊಬ್ಬ ಅಧ್ಯಾತ್ಮ ಸಾಧಕರು. ಓಶೋ ವಿಚಾರಗಳನ್ನು, ಓಶೋ ಪ್ರೇಮ ಕಂಪನವನ್ನು ಸಮರ್ಥವಾಗಿ ದಾಟಿಸುತ್ತಿರುವ ಸಂವಾಹಕ ಅನ್ನಬಹುದು ಅವರನ್ನು.

ಹೆಚ್ಚಿನದೇನು ಹೇಳುವುದು? ಕೆಲವನ್ನ ಅನುಭವಿಸಿಯಷ್ಟೆ ತಿಳಿಯಬೇಕು 🙂
ಇಷ್ಟು ದಿನದ ಎಚ್ಚರ ದಿಕ್ಕು ತಪ್ಪಿದೆ.
ಕೊನೆಗೂ ನಾನು
ಕಾಲು ಜಾರಿ ಬಿದ್ದಿದ್ದೇನೆ,
ತಳವಿಲ್ಲದಾಳಕ್ಕೆ.

Author: Jayaram

17 Comments

  1. Super Article

    • This is the perecft post for me to find at this time

  2. The Energy behind these words, the flow is conveying that the brain and information therein, the hand, the fingers of the writer have happened a tool on par with computer….., to allow the heart to express what it experienced.

    Reading this is a beautiful journey. Thank you Chetana Teerthahalli

    • Wow! Great to find a post with such a clear meegssa!

      • Thank you

  3. super

  4. My heart beat rate gone up while am reading this article don’t know why.

  5. So beautifully expressed.. Thank You!

  6. Nice info chethana thank you

    • Thank You

  7. ಧನ್ಯವಾದಗಳು ಚೇತನ ಅವರೇ.
    ನಿಮ್ಮ ನೇರ ಅನಿಸಿಕೆ ಹಂಚಿಕೊಂಡಿದಕ್ಕೆ.
    ಓಶೋ ಅವರ ಕೆಲವು ಮಾತುಗಳಿಂದಲೇ ಪ್ರೇರಿತನಾದ ನಾನು ಅವರ ಪರಮ ಅನುಯಾಯಿಯಾಗಿದ್ದೇನೆ.
    ನನ್ನೊಳಗಿನ ಕೆಲವು ಪ್ರೆಶ್ನೆಗಳಿಗೆ ನಿಜಕ್ಕೂ ಉತ್ತರ ಸಿಕ್ಕಿದೆ ಇದರಿಂದ.
    ಆದ್ದರಿಂದ ಶಿವಮೊಗ್ಗ ಜಿಲ್ಲೆಯ ಪುಟ್ಟ ಗ್ರಾಮದವನಾದ ನಾನು ಮೈಸೂರಿನ ಓಶೋ ಅಲ್ಲಮ ಫೌಂಡೇಶನ್ ಸೇರಲು ಬಹಳ ಕಾತುರದಿಂದ ಕಾಯುತ್ತಿದ್ದೇನೆ.
    ಇಲ್ಲಿ ಸೇರಲು ಯಾವ ರೀತಿ ನಿಯಮ ಗಳು ಅನುಸರಿಸಬೇಕು ಎಂದೂ ತಿಳಿಸಿಕೊಡಿ. ದಯವಿಟ್ಟು.
    ಓಶೋ ಸನ್ನಿಧಿ ಸೇರ್ಪಡೆಗೊಳ್ಳಲು ಬಯಸುವ ಕನ್ನಡದ ಭಕ್ತ.
    ಶಶಿಕುಮಾರ್.

    • ಯಾವುದೇ ನಿಯಮಗಳು ಇಲ್ಲ. ನೇರವಾಗಿ ಧ್ಯಾನ ಶಿಬಿರಕ್ಕೆ ನೋಂದಾಯಿಸಿಕೊಳ್ಳಿ, ಬನ್ನಿ. ವಿವರಗಳಿಗೆ
      :osho sannidhi Mysore. Group on face book.
      All the best 🙂

  8. Subtle but Rock Solid truth!!

  9. ನಿಮ್ಮ ಅನುಭವ ಸಂತಸ ತಂದಿತು ನಾನೂ ಆರಂಭದಲ್ಲಿ
    ಹಾಗೇಅಂದು ಕೂಂಡಿದ್ದೆ.ಅವರ ಮಹಾನ್ ಗ್ರಂಥಗಳನ್ನು ಓದುತ್ತಾ ಹೋದಂದೆ ಕರಗುತ್ತಾ ಬಂದೆ.ವಿಚಾರದ ದಿಕ್ಕನ್ನು ಬದಲಿಸಿಕೋಂಡೆ,ರೂಪಾಂತರಕ್ಕೆ‌ ಕಾಯುತ್ತಿರುವೆ.
    ಧನ್ಯವಾದಗಳು.

  10. ಚೇತನಾ ತೀರ್ಥಹಳ್ಳಿ ಯವರ ಲೇಖನ ಓದಿದ ನಂತರ, ನಾನು ಮೈಸೂರಿನಲ್ಲುರುವ ಓಶೊ ಆಶ್ರಮದ ಬಗ್ಗೆ ಗೂಗಲ್ನಲ್ಲಿ ಹುಡುಕಿದೆ. ನನ್ನೂರಿಗೆ ಹೋಗುವಾಗ & ಬರುವಾಗ ರಿಂಗ್ ರಸ್ತೆಯಲ್ಲಿಯೆ ಚಲಿಸುವುದು ಸಾಮಾನ್ಯ. ಮೈಸೂರಿನ ರಿಂಗ್ ರಸ್ತೆಯಿಂದ ಕೂಗಳತೆಯಲ್ಲಿಯೆ ಇರುವ ಈ ಧ್ಯಾನ ಮಂದಿರಕ್ಕೆ ಆಕಸ್ಮಿಕ ಎಂಬಂತೆ ಭೇಟಿ ನೀಡಿ, ಸ್ಥಳದಲ್ಲಿಯೆ ಹೆಸರು ನೋಂದಾಯಿಸಿ, ಶಿಬಿರದಲ್ಲಿ ಭಾಗವಹಿಸಿದ್ದು ಅವಿಸ್ಮರಣೀಯ.

Leave a Reply

Your email address will not be published. Required fields are marked *